ಜಾನ್ಸನ್, ಸ್ಯಾಮ್ಯುಯಲ್
1709-1784. ಕವಿ, ವಿಮರ್ಶಕ ಪ್ರಬಂಧಕಾರ, ನಿಘಂಟುಕಾರ ಹಾಗೂ ಮೇಧಾವಿ ಮಾತುಗಾರ. ಹುಟ್ಟಿದ್ದು ಸ್ಟಾಫರ್ಡ್‍ಷೈರಿನ ಲಿಚ್ ಫೀಲ್ಡಿನಲ್ಲಿ. ತಂದೆ ಮೈಕೇಲ್ ಆ ಊರಿನ ಪುಸ್ತಕ ವ್ಯಾಪಾರಿ, ಗಣ್ಯವ್ಯಕ್ತಿ, ಸ್ಯಾಮ್ಯುಯಲ್ ಹುಟ್ಟಿದಾಗ ಆತ ನಗರದ ಮೇಯರ್ ಪದವಿಗೆ ಏರಿದ್ದ.
ಸ್ಯಾಮ್ಯುಯಲ್ ಮಗುವಾಗಿದ್ದಾಗ ಗಂಡಮಾಲೆ ವ್ಯಾಧಿಗೆ ತುತ್ತಾಗಿ ಬಹಳ ಸೊರಗಿದ. ರಾಣಿಯ ಹಸ್ತಸ್ಪರ್ಶದಿಂದ ಕಾಯಿಲೆ ವಾಸಿಯಾಗುವುದೆಂಬ ನಂಬಿಕೆಯಿಂದ ತಾಯಿ, ಈತನನ್ನು ಅರಮನೆಗೆ ಕರೆದುಕೊಂಡು ಹೋಗಿ ಮಹಾರಾಣಿಯ ಕೈಯಲ್ಲಿ ಮುಟ್ಟಿಸಿದಳು. ಕಾಯಿಲೆ ಗುಣವಾಗಲಿಲ್ಲವಾದರೂ ಅಂದು ರಾಣಿ ಹಾಕಿದ ಚಿನ್ನದ ತಾಯಿತಿ ಮಾತ್ರ ಸಾಯುವವರೆಗೂ ಈತನ ಕತ್ತಿನಲ್ಲಿತ್ತು. ಧಾರ್ಮಿಕ ಪ್ರವೃತ್ತಿಯ ತಾಯಿ, ಜಾನ್‍ಸನ್‍ನಿಗೆ ಎಳೆವಯಸ್ಸಿನಲ್ಲಿಯೇ ಪ್ರಾರ್ಥನಾ ವಿಧಿಗಳನ್ನು ಬಾಯಿಪಾಠ ಮಾಡಿಸಿದ್ದಳು. 1717ರಲ್ಲಿ ಈತ ಲಿಚ್‍ಫೀಲ್ಡಿನ ಗ್ರಾಮರ್ ಪಾಠಶಾಲೆಯನ್ನು ಸೇರಿ, ಅಲ್ಲಿ ಹಮ್‍ಫ್ರೀ ಹಾಕಿನ್ಸ್‍ನ ನೇತೃತ್ವದಲ್ಲಿ ಲ್ಯಾಟಿನ್ ಭಾಷೆಯನ್ನು ಕಲಿತ. ಮುಂದೆ 1728ರಲ್ಲಿ ಆಕ್ಸ್‍ಫರ್ಡಿನ ಪೆಂಬ್ರೋಕ್ ಕಾಲೇಜನ್ನು ಸೇರಿದನಾದರೂ ಬಡತನದಿಂದಾಗಿ ಯಾವ ಪದವಿಯನ್ನೂ ಪಡೆಯದೆ ಊರಿಗೆ ಹಿಂದಿರುಗಿದ. ಆ ವರ್ಷವೇ ಈತನ ತಂದೆ ಸಾವನ್ನಪ್ಪಿದ. ಅಲ್ಲಿಂದ ಮೂವತ್ತು ವರ್ಷಗಳ ಕಾಲ ಈತ ಬಡತನದೊಡನೆ ದಿಟ್ಟತನದಿಂದ ಹೋರಾಡಿದ. ತನ್ನ ಅಷ್ಟಾವಕ್ರತೆ, ಕೊಳಕು ಉಡುಪು, ವಿಚಿತ್ರ ವರ್ತನೆಗಳಿಂದಾಗಿ ಈತ ಜನರ ನಗು ಮತ್ತು ತಿರಸ್ಕಾರಕ್ಕೆ ಗುರಿಯಾಗುತ್ತಿದ್ದನಾದರು ಈತನ ಪ್ರಖರಬುದ್ಧಿ ಎಲ್ಲರನ್ನೂ ಚಕಿತಗೊಳಿಸುತ್ತಿತ್ತು. ಲಿಚ್‍ಫೀಲ್ಡಿನಲ್ಲಿ ತನ್ನ ಜೀವನವನ್ನು ಸಾಗಿಸಲು ಉಪಾಯಕಾಣದೆ ಈತ ಲೀಸ್ಟರ್‍ಷೈರಿನ ಒಂದು ಗ್ರಾಮರ್ ಶಾಲೆಯಲ್ಲಿ ಸಹಾಯಕ ಉಪಾಧ್ಯಾಯನಾದ. ಅಲ್ಲಿಂದ ಬರ್ಮಿಂಗ್‍ಹ್ಯಾಮಿಗೆ ತೆರಳಿ ಅಷ್ಟಿಷ್ಟು ಸಾಹಿತ್ಯ ಸಂಬಂಧವಾದ ಲೇಖನಗಳನ್ನು ಬರೆದ. ಆಗ ಅಬಿಸೀನಿಯ ಕುರಿತ ಒಂದು ಲ್ಯಾಟಿನ್ ಗ್ರಂಥವನ್ನು ಅನುವಾದಿಸಿದ. ಪೊಲೀಟಿಯನ್ ಕವಿಯ ಕವನಗಳನ್ನು ವ್ಯಾಖ್ಯಾನದೊಡನೆ ಪುಸ್ತಕರೂಪದಲ್ಲಿ ಪ್ರಕಟಿಸುವ ಉದ್ದೇಶವಿತ್ತಾದರೂ ನಿರೀಕ್ಷಿಸಿದ ಚಂದಾಹಣ ಬರಲಿಲ್ಲವಾಗಿ ಅದು ಪ್ರಕಟವಾಗಲಿಲ್ಲ. ಅಲೆಮಾರಿತನದ, ಶುದ್ಧ ಕಾರ್ಪಣ್ಯದ ಜೀವನವನ್ನು ನಡೆಸುತ್ತಿದ್ದಾಗಲೇ ತನಗಿಂತ ವಯಸ್ಸಿನಲ್ಲಿ 20 ವರ್ಷ ಹಿರಿಯಳಾದ ಎಲಿಜûಬೆತ್ ಪೋರ್ಟರ್ ಎಂಬ ವಿಧವೆಯನ್ನು 1735ರಲ್ಲಿ ಮದುವೆಯಾದ. ಇದೊಂದು ವಿಚಿತ್ರ ಪ್ರಸಂಗ. ಅವಳನ್ನು ತನ್ನ ಪ್ರೀತಿಯ ಟೆಟ್ಟಿ ಎಂದು ಕರೆದು, ತಾನು ನೋಡಿದ್ದ ಹೆಂಗಸರ ಪೈಕಿ ಅತ್ಯಂತ ಚೆಲುವೆ ಹಾಗೂ ಕುಶಲೆಯೆಂದು ಕೊಂಡಾಡಿದ. ಮದುವೆಯಾದ ಮೇಲೆ ದುಡಿಮೆಯ ಅವಶ್ಯಕತೆ ಇನ್ನೂ ಅಧಿಕವಾಯಿತು. ಹೆಂಡತಿಯ ಸಹಾಯದಿಂದ ವಸತಿ ಮತ್ತು ಊಟದ ವ್ಯವಸ್ಥೆಯುಳ್ಳ ಹೊಸ ಶಾಲೆಯನ್ನು ಪ್ರಾರಂಭಿಸಿದ. ಆ ಪ್ರಯೋಗವೂ ಯಶಸ್ವಿಯಾಗದೆ ಶಾಲೆಯನ್ನು ಮುಚ್ಚಬೇಕಾಯಿತು. ಆ ಶಾಲೆಗೆ ಸೇರಿದ ಕೆಲವೇ ವಿದ್ಯಾರ್ಥಿಗಳ ಪೈಕಿ ಮುಂದೆ ನಟನಾಗಿ ಖ್ಯಾತಿ ಪಡೆದ ಡೇವಿಡ್ ಗ್ಯಾರಿಕನೂ ಒಬ್ಬ. ಲಂಡನ್ನಿಗೆ ಹೋದ ಮೇಲೆ ಈ ಶಿಷ್ಯನ ನೆರವು ಜಾನ್ಸನ್‍ಗೆ ಹೆಚ್ಚಾಗಿ ದೊರೆಯಿತು.	

ಹೀಗೆ ಯಾವ ವೃತ್ತಿಯಲ್ಲೂ ಸರಿಯಾಗಿ ನೆಲೆ ಸಿಗದ ಜಾನ್‍ಸನ್ ತನ್ನ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ಲಂಡನ್ನಿಗೆ ತೆರಳಿದ (1737). ಆಗ ಈತನ ಹತ್ತಿರ ಇದ್ದುದು ಸ್ವಲ್ಪ ಹಣ, ಐರೀನ್ ಎಂಬ ನಾಟಕದ ಹಸ್ತ ಪ್ರತಿಯ ಮೂರು ಅಂಕಗಳು. ಒಂದೆರಡು ಪರಿಚಯ ಪತ್ರಗಳು ಅಷ್ಟೇ. ಸ್ವಾಭಿಮಾನ ಮತ್ತು ಧೈರ್ಯಗಳೇ ಈತನ ಬಂಡವಾಳವಾಗಿತ್ತು. ಜೊತೆಯಲ್ಲಿ ಪ್ರಿಯ ವಿದ್ಯಾರ್ಥಿ ಗ್ಯಾರಿಕ್ಕನೂ ಹೊಸ ಬಾಳಿನ ಕನಸು ಕಾಣುತ್ತ ಲಂಡನ್ನಿಗೆ ಹೊರಟ. ಒಂದು ವರ್ಷ ಕ್ರಮವಾದ ಯಾವ ಕೆಲಸವೂ ದೊರಕದೆ ಅಲ್ಲಲ್ಲಿ ಅಲೆಯಬೇಕಾಯಿತು. ಕೆಲಸವನ್ನು ಕೇಳಲು ಜಾನ್‍ಸನ್ ಭೇಟಿ ಮಾಡಿದ ಗ್ರಂಥ ಪ್ರಕಾಶಕನೊಬ್ಬ ಇವನ ದಷ್ಟಪುಷ್ಟ ಮೈಯನ್ನು ನೋಡಿ ಮೂಟೆ ಹೊರುವ ಕೂಲಿಗಾಗಿ ದುಡಿ ಎಂದು ಹೇಳಿದನಂತೆ. ಅಂಥ ಕಷ್ಟ ಸಮಯದಲ್ಲಿ ತನಗೆ ಸಹಾಯ ನೀಡಿದ ಹೆರ್ವೆಯನ್ನು ಕೊನೆಯವರೆಗೂ ಜಾನ್‍ಸನ್ ತುಂಬ ಕೃತಜ್ಞತೆಯಿಂದ ನೆನೆಯುತ್ತಿದ್ದ. ಒಂದು ವರ್ಷದ ಮೇಲೆ ಪತ್ರಿಕಾ ವರದಿಗಾರನಾಗಿ ನಿಯತ ಕೆಲಸವೊಂದು ದೊರಕಿತು. ಕೇವ್‍ನ ಜಂಟಲ್‍ಮನ್ಸ್ ಮ್ಯಾಗಜಿûೀನಿನ ಸೆನೇಟ್ ಆಫ್ ಲಿಲ್ಲಿಪುಟ್ ಎಂಬ ವಿಭಾಗದಲ್ಲಿ ಜಾನ್‍ಸನ್ ಕೊಡುತ್ತಿದ್ದ ವರದಿಗಳು ತಮ್ಮ ವಿಶಿಷ್ಟ ಶೈಲಿಯಿಂದಾಗಿ ಬಹು ಜನಪ್ರಿಯವಾಗಿ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದವು. ತನ್ನ ಉತ್ಪ್ರೇಕ್ಷಿತ ವರದಿಗಳನ್ನು ಜನ ಸತ್ಯವೆಂದೇ ನಂಬುತ್ತಿರುವರೆಂಬ ವಿಷಯ ತಿಳಿದಾಗ ಜಾನ್‍ಸನ್ ಪತ್ರಿಕಾ ಬರೆಹವನ್ನು ನಿಲ್ಲಿಸಿಬಿಟ್ಟ. ಇದು ಆತನ ಪ್ರಾಮಾಣಿಕತೆಗೆ ಒಂದು ಹಿರಿಯ ನಿದರ್ಶನ. 
ಈತನ ಲಂಡನ್ (1738), ದಿ ವ್ಯಾನಿಟಿ ಆಫ್ ಹ್ಯೂಮನ್ ವಿಷಸ್ (1749) ಎಂಬೆರಡು ಕವನಗಳು ಲ್ಯಾಟಿನ್ ಕವನಗಳ ಅನುಕರಣಗಳು. ಇಲ್ಲಿಯ ಬಳಕೆಯಿಂದಾಗಿ ಹಿರಾಯಿಕ್ ಕಪ್ ಲೆಟ್ ಕವನ ಮಾದರಿಗೆ ಒಂದು ಹೊಸ ಶಕ್ತಿಯೂ ತೂಕವೂ ಬಂತು. ಯಾರಿಗಾದರೂ ಲಂಡನ್ ಪಟ್ಟಣ ಬೇಸರವಾದರೆ ಬಾಳೇ ಬೇಸರವಾದಂತೆ ಎಂದು ಹೇಳಿದ ಜಾನ್‍ಸನ್ ಲಂಡನ್ ಎಂಬ ವಿಡಂಬನ ಕವನ ಬರೆದದ್ದು ಲಂಡನ್‍ಗೆ ಬಂದ ಕೆಲವು ತಿಂಗಳುಗಳಲ್ಲಿ. ಜ್ಯೂವೆನಲ್ ರೋಮ್ ನಗರವನ್ನು ಬಣ್ಣಿಸುವಂತೆ ಜಾನ್ಸ್‍ನ್ ಲಂಡನ್ ನಗರವನ್ನು ವರ್ಣಿಸಲಿಲ್ಲ. ಆ ಕಾಲದ ರಾಜಕೀಯ ಪ್ರಸ್ತಾಪ, ಮುಖ್ಯವಾಗಿ ಸರ್ ರಾಬರ್ಟ್ ವಾಲ್‍ಪೋಲನ ದೀರ್ಘ ಆಳ್ವಿಕೆ ಮತ್ತು ಧೋರಣೆಯ ಟೀಕೆಯೇ ಈ ಕವನದಲ್ಲಿ ಹೆಚ್ಚಾಗಿದೆ. ಲಂಡನ್ ಕವನದಲ್ಲಿ ವ್ಯಾನಿಟಿ ಆಫ್ ಹ್ಯೂಮನ್ ವಿಷಸ್ ಕವನದ ಘನತೆ ಇಲ್ಲದಿದ್ದರೂ ಬಡತನ ಕುರಿತ ಭಾಗ ತೀಕ್ಷ್ಣವಾಗಿದೆ. ಬಡತನದಿಂದ ಅಡಗಿಸಿದ ಸಾಮಥ್ರ್ಯ ಸಾವಕಾಶವಾಗಿ ಮೇಲೆ ಬರುತ್ತದೆ ಎನ್ನುವ ಸಾಲು ಪ್ರಸಿದ್ಧವಾಗಿದೆ. ಇದೇ ಮಾದರಿಯಲ್ಲಿ ಬರೆದ ವ್ಯಾನಿಟಿ ಆಫ್ ಹ್ಯೂಮನ್ ವಿಷಸ್‍ನಲ್ಲಿ ಕವಿಯ ಕಣ್ಣು ಇಡೀ ಪ್ರಪಂಚದತ್ತ ವಿಹಂಗಮ ದೃಷ್ಟಿಯನ್ನು ಹಾಯಿಸುತ್ತದೆ. ಇದು ಇಡೀ ಮಾನವ ಜೀವನವನ್ನು ಕುರಿತ ಕವನ. ಇತಿಹಾಸದ ಬೇರೆ ಬೇರೆ ಕಾಲಗಳಿಂದ ನಿದರ್ಶನಗಳನ್ನು ಆಯ್ದುಕೊಟ್ಟದ್ದು ಮಾನವನ ಆಸೆಗಳೆಲ್ಲ ಪೊಳ್ಳೆಂದು ತೋರಿಸುವುದೇ ಇಲ್ಲಿ ಜಾನ್ಸನ್ನನ ಉದ್ದೇಶ. ಈ ಎರಡೂ ಕವನಗಳು ಪ್ರಮುಖವಾಗಿ ಮಾನವನ ಭ್ರಾಂತಿ ಮತ್ತು ದೌರ್ಬಲ್ಯಗಳನ್ನು ಕುರಿತ ನೀತಿ ಬೋಧಕ ವಿಡಂಬನೆಯಾಗಿವೆ.

ಲೈಫ್ ಆಫ್ ಸ್ಯಾವೇಜ್ (1744) : ಒಂದು ಅಪೂರ್ವ ಕೃತಿ. ಲಂಡನ್ನಿನ ಗ್ರಬ್ ರಸ್ತೆಯಲ್ಲಿ ವಾಸಮಾಡುತ್ತ ಬಡತನದಲ್ಲಿ ತನ್ನ ಬಾಳನ್ನು ನೂಕುತ್ತಿದ್ದ ದಿನಗಳಲ್ಲಿ ಜಾನ್ಸನ್ನನಿಗೆ ದೊರೆತ ಸ್ನೇಹಿತ ರಿಚರ್ಡ್ ಸ್ಯಾವೇಜನ ಜೀವನಚರಿತ್ರೆ ಇಲ್ಲಿದೆ. ಶ್ರೀಮಂತರ ವಿಲಾಸದ ಕಥೆಗಳ ದಾಸ್ತಾನು ರಿಚರ್ಡ್ ಸ್ಯಾವೇಜ್ ನಲ್ಲಿ ಹೇರಳವಾಗಿತ್ತು. ಜಾನ್ಸನ್ನನ ಕೃತಿ ಸ್ಯಾವೇಜ್‍ನ ಕೃತಿಗಳ ವಿಮರ್ಶೆಯಲ್ಲ. ಹೆಚ್ಚಾಗಿ ಆತನ ವ್ಯಕ್ತಿಚಿತ್ರ. ಅತ್ಯಂತ ನಿಕಟ ಪರಿಚಯದಿಂದ ಬರೆದ ಪ್ರಾಮಾಣಿಕವಾದ ಜೀವನ ಚರಿತ್ರೆಯಿದು. ಈ ಕೃತಿ ತನ್ನ ಸ್ನೇಹಿತನಿಗೆ ಜಾನ್ಸನ್ ಅರ್ಪಿಸಿದ ಒಂದು ಶ್ರದ್ಧಾಂಜಲಿ.
ಇಂಗ್ಲಿಷ್ ನಿಘಂಟು : ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್ ಎಂಬ ಹೆಸರಿನಿಂದ 1755ರಲ್ಲಿ ಪ್ರಕಟವಾದ ಇಂಗ್ಲಿಷ್ ಜಾನ್‍ಸನ್ನನ ಮತ್ತೊಂದು ಅಮೋಘಕೃತಿ. ಅತ್ಯಂತ ಪರಿಶ್ರಮದಿಂದ ತಯಾರಿಸಿದ ವಿದ್ವತ್ಪೂರ್ಣ ಕೃತಿ. ನ್ಯಾತನಿಯಲ್ ಬೇಯ್ ಲಿ ರಚಿಸಿದ ಯೂನಿವರ್ಸಲ್ ಎಟಿಮೋಲಾಜಿಕಲ್ ಇಂಗ್ಲಿಷ್ ಡಿಕ್ಷನರಿ 1721ರಲ್ಲಿ ಪ್ರಕಟವಾಗಿತ್ತು. ಆದರೆ ಜಾನ್‍ಸನ್ ತನ್ನ ಕೃತಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಒಂದು ನೆಲೆಗೆ ತರಲು, ಇಂಗ್ಲಿಷ್ ನುಡಿಗಟ್ಟಿನ ಅರ್ಥವನ್ನು ನಿಷ್ಕ್ಟವಾಗಿ ಗೊತ್ತುಮಾಡಲು, ಅದರ ಶುದ್ಧತೆಯನ್ನು ರಕ್ಷಿಸಲು ಮೊದಲ ಬಾರಿಗೆ ಕೈಗೊಂಡ ಸಾಹಸವನ್ನು ಕಾಣಬಹುದು. ಯಾರ ಸಹಾಯವೂ ಇಲ್ಲದೆ ಈ ಕೆಲಸ ಕೈಗೊಂಡದು ಅವನ ಆತ್ಮವಿಶ್ವಾಸಕ್ಕೂ ವಿದ್ವತ್ತಿಗೂ ಸಾಕ್ಷಿಯಾಗಿದೆ. ಜಾನ್ಸನ್ನನ ಸ್ನೇಹಿತನೊಬ್ಬ ಹೇಳಿದಂತೆ ಫ್ರೆಂಚ್ ಪರಿಷತ್ತಿನ ನಲವತ್ತು ವಿದ್ವಾಂಸರು ನಲವತ್ತು ವರ್ಷಗಳಲ್ಲಿ ಸಾಧಿಸಿದ ಕಾರ್ಯವನ್ನು ಜಾನ್‍ಸನ್ ಒಬ್ಬನೇ ಸಾಧಿಸಿದ. ಈ ನಿಘಂಟಿನ ಕಲ್ಪನೆ ಬಹುಕಾಲದಿಂದ ಜಾನ್ಸನ್ನನ ಮನಸ್ಸಿನಲ್ಲಿ ಬೆಳೆದಿತ್ತು. ಪೂರ್ವಭಾವಿಯಾಗಿ ಜಾನ್ಸನ್ ಇದರ ಯೋಜನೆಯನ್ನು 1747ರಲ್ಲಿ ಪ್ರಕಟಿಸಿ ಅರ್ಲ್ ಆಫ್ ಚೆಸ್ಟರ್ ಫೀಲ್ಡನಿಗೆ ಅದನ್ನು ಕಳಿಸಿಕೊಟ್ಟ. ಆದರೆ ಆ ಶ್ರೀಮಂತನಿಂದ ಯಾವ ಪ್ರೋತ್ಸಾಹವಾಗಲಿ ಧನಸಹಾಯಾಗಲಿ ಆಗ್ಗೆ ಒದಗಲಿಲ್ಲ. 1755ರಲ್ಲಿ ಜಾನ್ಸನ್ನ ಮೇರುಕೃತಿ ಬೆಳಕು ಕಂಡಮೇಲೆ ಅದರ ಮಹತ್ತ್ವವನ್ನು ಗಮನಿಸಿದ ಚೆಸ್ಟರ್ ಫೀಲ್ಡ್‍ವಲ್ರ್ಡ್ ಎಂಬ ಪತ್ರ್ರಿಕೆಯಲ್ಲಿ ಅದರ ಬಗ್ಗೆ ಪ್ರಶಂಸೆಯ ಮಾತುಗಳನ್ನು ಬರೆದನಲ್ಲದೆ ಜಾನ್ಸನ್ನನಿಗೆ ಸಹಾಯ ಮಾಡಲು ಮುಂದೆ ಬಂದ. ಅಪಾರ ಆತ್ಮಗೌರವ ಇದ್ದ ಜಾನ್ಸನ್ ಆ ಶ್ರೀಮಂತನ ಸಹಾಯವನ್ನು ನಿರಾಕರಿಸಿ ಅವನಿಗೆ ಬರೆದ ಒಂದು ಪತ್ರ ಇಂದಿಗೂ ಪ್ರಸಿದ್ಧವಾಗಿದೆ.
ತನ್ನ ನಿಘಂಟಿನಲ್ಲಿ ಜಾನ್ಸನ್ನನ ಉದ್ದೇಶ, ಪದಗಳನ್ನು ಹೀಗೆಯೇ ಬಳಸಬೇಕೆಂದು ಅಧಿಕಾರಯುತವಾಗಿ ಹೇಳುವುದಲ್ಲ; ಇಂಗ್ಲಿಷ್ ಪದಗಳನ್ನು ನಿರೂಪಿಸುವುದು, ವರ್ಗೀಕರಿಸುವುದು ಹಾಗೂ ಅವುಗಳಿಗೆ ಸುವ್ಯವಸ್ಥಿತ ರೂಪವನ್ನು ಕೊಡುವುದು, ನಿಘಂಟಿನ ಮೂಲಕ ಆತ ಇಂಗ್ಲಿಷ್ ಭಾಷಾ ಚರಿತ್ರೆಯ ಒಳನೋಟವನ್ನೇ ನೀಡಿದ್ದಾನೆ. ಮತಧರ್ಮ ಸಂಬಂಧವಾದ ಪಾರಿಭಾಷಿಕ ಶಬ್ದಗಳನ್ನು ಹುಕರ್ ಮತ್ತು ಬೈಬಲ್ಲಿನ ಭಾಷಾಂತರಕಾರರಿಂದ ನಾವು ಕಲಿತರೆ, ವಿಜ್ಞಾನದ ವಿವೇಚನೆಗೆ ತಕ್ಕುದಾದ ಮಾತುಗಳನ್ನು ಬೇಕನ್‍ನಿಂದ ಪಡೆದರೆ, ರಾಜನೀತಿ ನೌಕಾಶಾಸ್ತ್ರ, ಯುದ್ಧ ಮುಂತಾದ ವಿಷಯಗಳ ನಿರೂಪಣೆಗಾಗಿ ರ್ಯಾಲೀಯನ್ನು ಮೊರೆಹೊಕ್ಕರೆ, ಸ್ಟೆನ್ಸರ್ ಮತ್ತು ಸಿಡ್ನಿ ಅವರಿಂದ ಕಾವ್ಯ ಮತ್ತು ಕಾದಂಬರಿಗೆ ಬೇಕಾದ ನುಡಿಗಟ್ಟನ್ನು ಸಂಪಾದಿಸಿದರೆ, ಷೇಕ್ಸ್‍ಪಿಯರ್‍ನಿಂದ ಜನಸಾಮಾನ್ಯರ ಪದಗಳನ್ನು ತೆಗೆದು ಕೊಂಡರೆ ಸರಿಯಾದ ಇಂಗ್ಲಿಷ್ ಪದಗಳು ದೊರೆಯದೆ ತಮ್ಮ ಗಹನವಾದ ವಿಚಾರಗಳನ್ನು ವ್ಯಕ್ತಪಡಿಸಲಾಗಲಿಲ್ಲವೆಂದು ಲೇಖಕರು ಪೇಚಾಡಬೇಕಾಗಿಲ್ಲ-ಎಂದು ಜಾನ್ಸನ್ ಮುನ್ನುಡಿಯಲ್ಲಿ ಹೇಳಿ ಆಗ್ಗೆ ಇಂಗ್ಲಿಷ್ ಭಾಷೆ ಎಷ್ಟು ಪ್ರಬುದ್ಧವಾಗಿ ಬೆಳೆದಿತ್ತೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾನೆ.	
2,300 ಪುಟಗಳಲ್ಲಿ 40,000 ಪದಗಳನ್ನು ಒಳಗೊಂಡ ಈ ನಿಘಂಟು ಜನರಿಗೆ ವಿಸ್ಮಯವನ್ನುಂಟುಮಾಡಿತು. ಅದು ಅವರಿಗೆ ಒಂದು ರೀತಿಯಲ್ಲಿ ಇಂಗ್ಲಿಷ್ ಭಾಷೆಯ ವಿಶ್ವಕೋಶವೇ ಆಯಿತು. ಹಿಂದೆ ಯಾರೂ ಇಷ್ಟು ಪರಿಷ್ಕಾರವಾಗಿ ಪದಗಳ ವ್ಯುತ್ಪತ್ತಿಯನ್ನು ಕೊಟ್ಟಿರಲಿಲ್ಲ. ಆದರೂ ಈತ ಕೊಟ್ಟಿರುವ ವ್ಯುತ್ಪತ್ತಿ ಕೆಲವು ಕಡೆ ಅಷ್ಟು ಸಮರ್ಪಕವಾಗಿರಲಿಲ್ಲ. ಪದಗಳ ನಿಷ್ಕøಷ್ಟವಾದ ವಿವರಣೆಯನ್ನು ಕೊಡುವುದರಲ್ಲಿ ಅಪ್ರತಿಮ ಜಾಣ್ಮೆಯನ್ನೂ ಸ್ಪಷ್ಟತೆಯನ್ನೂ ಇಲ್ಲಿ ತೋರಲಾಗಿದೆ. ಪ್ರತಿಯೊಂದು ಪದಕ್ಕೂ ಇರುವ ಬೇರೆ ಬೇರೆ ಅರ್ಥಗಳ ವಿವರಣೆಯನ್ನು ಕೊಟ್ಟು ಪದಗಳ ಪ್ರಯೋಗವನ್ನು ನಿರ್ದಿಷ್ಟವಾಗಿ ಹೇಗೆ ಮಾಡಬೇಕೆಂಬುದನ್ನು ತೋರಿಸಿದೆ. ಸುಮಾರು 200 ವರ್ಷಗಳ ಅವಧಿಯ ಇಂಗ್ಲಿಷ್ ಸಾಹಿತ್ಯದಿಂದ ವಿಪುಲವಾಗಿ ಉದಾಹರಣೆಗಳನ್ನು ಕೊಡುವುದರ ಮೂಲಕ, ಪದಗಳ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ಕೊಡಲು ಇಲ್ಲಿ ಬಳಸಿರುವ ಹೇರಳವಾದ ನಿದರ್ಶನಗಳು ಈ ಕೃತಿಯ ಇನ್ನೊಂದು ವೈಶಿಷ್ಟ್ಯ. ಈ ಅಗಾಧ ಕಾರ್ಯವನ್ನು ಸುಮಾರು ಎಂಟು ವರ್ಷಗಳಲ್ಲಿ ಏಕಾಂಗಿಯಾಗಿ ಪಟ್ಟು ಹಿಡಿದು ಜಾನ್ಸನ್ ಸಾಧಿಸಿದ. ಆ ದಿನಗಳಲ್ಲಿ ತನ್ನ ಅನಾರೋಗ್ಯವನ್ನೂ ಬಡತನವನ್ನೂ ಕಡೆಗಣಿಸಿ ದುಡಿದ.

ವೈಯಕಿಕ ಅಭಿಪ್ರಾಯಗಳಿಗೆ ಎಡೆಯಿರಬಾರದ ನಿಘಂಟಿನಲ್ಲೂ ಜಾನ್‍ಸನ್ ತನ್ನ ಪೂರ್ವಾಗ್ರಹಗಳನ್ನು ಹಲವೆಡೆ ಸೂಚಿಸಿದ್ದಾನೆ. ಓಟ್ಸ್-ಇಂಗ್ಲೆಂಡಿನಲ್ಲಿ ಕುದುರೆಗಳೂ ಸ್ಕಾಟ್ಲೆಂಡಿನಲ್ಲಿ ಜನಗಳೂ ತಿನ್ನುವ ಒಂದು ಆಹಾರ ಧಾನ್ಯ ಎನ್ನುವಲ್ಲಿ, ಪೆನ್‍ಷನ್-ಸರ್ಕಾರದಿಂದ ವೇತನ ಪಡೆದು ದೇಶಕ್ಕೆ ದ್ರೋಹ ಮಾಡುವುದು ಎನ್ನುವಲ್ಲಿ ನಾವದನ್ನು ಗುರುತಿಸಬಹುದು.

ಅಂತೂ ಜಾನ್ಸನ್ನನ ನಿಘಂಟು ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಯಿತು; ಮುಂದೆ ಅನೇಕ ಪರಿಷ್ಕರಣೆಗಳಿಗೆ ಬುನಾದಿಯಾಯಿತು.

ಈ ಕಾರ್ಯ ಯಶಸ್ವಿಯಾಗಿ ಪೂರೈಸಿದ್ದನ್ನು ನೋಡಿ ಸಂತೋಷಪಡುವ ಭಾಗ್ಯ ತನ್ನ ಬಾಳಿನ ಸ್ಫೂರ್ತಿಯ ಸೆಲೆಯಾಗಿದ್ದ ಹೆಂಡತಿ ಟೆಟ್ಟಿಗೆ ಇರಲಿಲ್ಲ. ಆ ವೇಳೆಗೆ ಆಕೆ ವಿಧಿವಶಳಾಗಿದ್ದಳು (1752). ಇದು ಜಾನ್ಸನ್ನನ ಸಂತೋಷವನ್ನು ಕುಗ್ಗಿಸಿತು. ಲೌಕಿಕವಾಗಿ ಈ ನಿಘಂಟು ಜಾನ್ಸನ್ನನಿಗೆ ಸಾರ್ವತ್ರಿಕ ಮನ್ನಣೆ, ಕೀರ್ತಿ, ಪ್ರತಿಷ್ಠೆಗಳನ್ನು ತಂದಿತು; ಸಾಹಿತ್ಯಲೋಕದ ಸರ್ವಾಧಿಕಾರ ಪಟ್ಟಕ್ಕೆ ಏರಿಸಿತು. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಈತನಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತು. ಬಡತನದ ದೆಸೆಯಿಂದ ತಾನು ಡಿಗ್ರಿ ವ್ಯಾಸಂಗವನ್ನು ಪೂರೈಸಲಾರದೆ ಹೋದ ನಿರಾಶೆಯನ್ನು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ನೀಡಿದ ಅಪೂರ್ವ ಗೌರವ ಅಳಿಸಿತಲ್ಲದೆ ಅವನಲ್ಲಿ ಹೆಮ್ಮೆಯನ್ನೂ ಮೂಡಿಸಿತು. ಇದರಿಂದ ವರ್ಷಕ್ಕೆ 300 ಪೌಂಡು ವಿಶ್ರಾಂತಿ ವೇತನವೂ ಬಂದಿದ್ದರಿಂದ ಆರ್ಥಿಕಸ್ಥಿತಿ ಸುಧಾರಿಸಿತಲ್ಲದೆ ಒಂದು ದೃಷ್ಟಿಯಿಂದ ಆತನ ಭಾಗ್ಯೋದಯವೇ ಆಯಿತು.			(ಎಚ್.ಜಿ.ಎಸ್.ಆರ್.)

ರ್ಯಾಂಬ್ಲರ್, ಐಡ್ಲರ್ ಪತ್ರಿಕೆಗಳು : ನಿಘಂಟುವಿನ ಕೆಲಸ ಮಾಡುತ್ತಿದ್ದ ಕಾಲದಲ್ಲಿಯೇ ಜಾನ್‍ಸನ್ ರ್ಯಾಂಬ್ಲರ್ ಎಂಬ ಪತ್ರಿಕೆಯೊಂದನ್ನು ಹೊರಡಿಸಿ ಅದರಲ್ಲಿ ಪ್ರಬಂಧಗಳನ್ನು ಬರೆಯತೊಡಗಿದ. ವಾರಕ್ಕೆ ಎರಡು ಸಂಚಿಕೆಗಳಂತೆ ಪ್ರಕಟವಾಗುತ್ತಿದ್ದ ಈ ಪತ್ರಿಕೆ ಎರಡು ವರ್ಷಗಳು ನಡೆದು 1752ರಲ್ಲಿ ನಿಂತುಹೋಯಿತು. ಸ್ಪೆಕ್ಟೇಟರ್ ಪತ್ರಿಕೆಯನ್ನೇ ತನ್ನ ಮಾದರಿಯಾಗಿಟ್ಟುಕೊಂಡ ರ್ಯಾಂಬ್ಲರ್ ಬಹು ನೀತಿ ಬೋಧಕವೂ ಭಾರವೂ ಆದ್ದರಿಂದ ಜನಪ್ರಿಯವಾಗಲಿಲ್ಲ. ಅನಂತರ ಜಾನ್‍ಸನ್ 1758-60ರ ಅವಧಿಯಲ್ಲಿ ಐಡ್ಲರ್ ಎಂಬ ಪತ್ರಿಕೆಯನ್ನು ಹೊರತಂದು ನಡೆಸಿದ. ಇದರಲ್ಲಿನ ಈತನ ಬರೆಹ ಲಘುಶೈಲಿಯದು.	(ಎಲ್.ಎಸ್.ಎಸ್.)
90ವರ್ಷ ವಯಸ್ಸಾಗಿದ್ದ ತನ್ನ ತಾಯಿ ಲಿಚ್‍ಫೀಲ್ಡಿನಲ್ಲಿ ಮೃತಿಹೊಂದಿದಾಗ (1759) ಜಾನ್ ಸನ್ ರ್ಯಾಸಿಲಸ್ ಎಂಬ ಕಾದಂಬರಿಯನ್ನು ಅವಳ ಅಂತ್ಯಸಂಸ್ಕಾರದ ಖರ್ಚಿಗಾಗಿ ಬರೆದ. ಇದರಿಂದ ಬಂದ ಹಣದಿಂದ ತಾಯಿ ಮಾಡಿದ್ದ ಚಿಲ್ಲರೆ ಸಾಲಗಳನ್ನು ತೀರಿಸಿದ. ಅಬಿಸೀನಿಯ ರಾಜಕುಮಾರನೊಬ್ಬ ತನ್ನ ತಂಗಿ ಅವಳ ಸಖಿ ಮತ್ತು ಪ್ರಾಜ್ಞನಾದ ಇಮ್ಲಾಕ್‍ರ ಜೊತೆ ಸುಖವನ್ನು ಹುಡುಕಿಕೊಂಡು ಹೊರಡುವುದೇ ಈ ಕಥೆಯ ವಸ್ತು. ಕೊನೆಯಲ್ಲಿ ಅವರಿಗೆ ಅನುಭವ ಕಲಿಸಿದ ಪಾಠ ಇಷ್ಟು : ಬಾಳಿನಲ್ಲಿ ಸಹಿಸಬೇಕಾದುದು ಕಹಿ ಅನುಭವವೇ ಹೆಚ್ಚು, ಸವಿಯುವಂಥ ಸಿಹಿ ಕಡಿಮೆ. ಪ್ರತಿಯೊಂದು ಜೀವನದ ಬಗೆಯಲ್ಲಿಯೂ ಅತೃಪ್ತಿ, ಬೇಸರ ಇವೆ. ಸಹನೆಯೊಂದೇ ಇದಕ್ಕೆ ಪರಿಹಾರ.
ಷೇಕ್ಸ್‍ಪಿಯರ್ ಕೃತಿಗಳ ಸಂಪಾದನೆ : 1745ರಲ್ಲಿ ಜಾನ್ ಸನ್ ಷೇಕ್ಸ್‍ಪಿಯರನ ಕೃತಿಗಳನ್ನು ಸಂಪಾದಿಸುವ ಆಶಯವನ್ನು ವ್ಯಕ್ತಪಡಿಸಿದ. ಈ ಯೋಜನೆಯನ್ನು ಕೈಗೊಂಡಿದ್ದು 1756ರಲ್ಲಿ. ಆದರೆ ಸಂಪಾದಿತ ಗ್ರಂಥ ಪ್ರಕಟವಾದ್ದು 1765ರಲ್ಲಿ. ಇದು ಕೆಲವು ವರ್ಷಗಳು ತಡವಾಗಿ ಬಂದುದಕ್ಕೆ ಟೀಕೆಯೂ ಬಂತು : ಆದರೂ ಇದು ಬೃಹತ್ ಪ್ರಮಾಣಗ್ರಂಥವೆಂದು ಹೆಸರು ಗಳಿಸಿತು. ಮುಂದಿನ ಅಸಂಖ್ಯ ಪರಿಷ್ಕರಣಗಳಿಗೆ ಜಾನ್‍ಸನ್ ಮಾಡಿದ ಕೆಲಸ ಅಡಿಪಾಯವಾಯಿತು. 1747ರಲ್ಲಿ ವಾರ್‍ಬರ್‍ಟನ್ ಸಂಪಾದಿಸಿದ ಕೃತಿಯನ್ನು ಆಧಾರವಾಗಿಟ್ಟುಕೊಂಡು ಫೋಲಿಯೋ ಮತ್ತು ಕ್ವಾರ್ಟೊ ಪ್ರತಿಗಳೊಡನೆ ಹೋಲಿಸಿ ತನಗೆ ಖಚಿತವೆಂದು ತೋರಿದ ಶುದ್ಧಪಾಠವನ್ನು ಈತ ತಯಾರಿಸಿದ. ಇದಲ್ಲಕ್ಕಿಂತ ಅಮೂಲ್ಯವಾದುದು ಈತ ಆ ಕೃತಿಗೆ ಬರೆದ ಮುನ್ನುಡಿ ಮತ್ತು ಟೀಕೆ ಟಿಪ್ಪಣಿಗಳು. ಜಾನ್ಸನ್ನನ ಮುನ್ನುಡಿ ಷೇಕ್ಸ್‍ಪಿಯರ್ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು.

ಕವಿಚರಿತ್ರೆ : ಲಂಡನ್ನಿನ ಮೂರು ಪ್ರಖ್ಯಾತ ಪ್ರಕಾಶಕರು ಜಾನ್ಸನ್ನನನ್ನು ಐವತ್ತೆರಡು ಕವಿಗಳ ಜೀವನ ಮತ್ತು ಕಾವ್ಯಪರಿಚಯವನ್ನು ಮಾಡಿಕೊಡುವ ಗ್ರಂಥವನ್ನು ಬರೆಯುವಂತೆ ಮನವೊಪ್ಪಿಸಿದರು. ಆ ಪಟ್ಟಿಯಲ್ಲಿ ರಿಚರ್ಡ್ ಸ್ಯಾವೇಜನನ್ನು ಬಿಟ್ಟು ಉಳಿದವರ ಪೈಕಿ ಖ್ಯಾತ ಕವಿಗಳಾದ ಮಿಲ್ಟನ್, ಡ್ರೈಡನ್, ಅಡಿಸನ್, ಪೋಪ್, ಸ್ವಿಫ್ಟ್, ತಾಮಸ್ ಗ್ರೇ, ಕೌಲಿ ಮೊದಲಾದವರು ಇದ್ದರು. ಕವಿಚರಿತ್ರೆ ಈತನ ಕೃತಿಗಳಲ್ಲೆಲ್ಲ ಅತ್ಯಂತ ಜನಾದರಣೀಯವಾಯಿತು. ಸಾಹಿತ್ಯಪ್ರಕಾರಗಳಲ್ಲಿ ಜೀವನ ಚರಿತ್ರೆಯೇ ಜಾನ್ಸನ್ನನಿಗೆ ತುಂಬ ಪ್ರಿಯವಾದುದು. ಈ ಕೃತಿಯಲ್ಲಿ ಈತ ಅನುಸರಿಸಿದ ನೀತಿ ಮೊದಲು ಕವಿಯ ಜೀವನ ಘಟನೆಗಳನ್ನು ನಮೂದಿಸುವುದು, ಅನಂತರ ಆ ಚೇತನದ ಗುಣವನ್ನು ಗುರುತಿಸುವುದು, ಕೊನೆಗೆ ಕಾವ್ಯವನ್ನು ವಿಮರ್ಶಿಸುವುದು, ಸತ್ಯದರ್ಶನ ಮಾಡಿಸುವಲ್ಲಿ ಕವಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾನೆಂಬುದೇ ಜಾನ್ಸನ್ನನ ಒರೆಗಲ್ಲು. ಸಾಮಾನ್ಯವಾದ ಸತ್ಯಗಳಾದರೂ ಅವನ್ನು ಒಂದು ಹುರುಪಿನಿಂದ, ಚುರುಕಿನಿಂದ ಅಥವಾ ಹೊಸತನದಿಂದ ಕವಿ ಹೇಳಬೇಕೆಂಬುದು ಜಾನ್ಸನ್ನನ ಅಭಿಮತ.				(ಎಚ್.ಜಿ.ಎಸ್.ಆರ್.)

ಈ ಕವಿಕಾವ್ಯಪರಿಚಯಗಳಲ್ಲಿ ಜಾನ್ಸನ್ನನ ಪರಿಪಕ್ವವಾದ ವಿಮರ್ಶಾಶಕ್ತಿ ಕಂಡುಬರುತ್ತದೆ. ಈ ಕೃತಿಗೆ ವಿಶೇಷ ಸೊಗಸು ಕೊಟ್ಟಿರುವುದು ಅವನ ಶೈಲಿ ಮತ್ತು ಅವನ ವಿಶಿಷ್ಟ ಮನೋಧರ್ಮವನ್ನು ವ್ಯಕ್ತಪಡಿಸುವ ಕಾವ್ಯಜಿಜ್ಞಾಸೆ. ಇದು ಇಂಗ್ಲಿಷ್ ಸಾಹಿತ್ಯಚರಿತ್ರೆಯಲ್ಲಿ ವಿಶೇಷ ಪ್ರಾಶಸ್ತ್ಯ ಪಡೆದಿದೆ.
ಜಾನ್‍ಸನ್ ಪ್ರಸಿದ್ಧ ಬರೆಹಗಾರ ಹೇಗೋ ಅಷ್ಟೇ ಮೇಧಾವಿ ಮಾತುಗಾರನೂ ಆಗಿದ್ದ. ಈತನಿಗೆ ಪ್ರಪಂಚದ ಸಮಸ್ತ ವಿಷಯಗಳ ಬಗ್ಗೆ ಸೊಗಸಾಗಿ ಮಾತನಾಡುವ ಶಕ್ತಿ ಇತ್ತು. ಅತ್ಯಂತ ಘನವಾದ ವಿಷಯದಿಂದ ಹಿಡಿದು ಅತಿ ಸಾಮಾನ್ಯ ವಿಷಯದವರೆಗೂ ಈತ ಓಜಸ್ಸಿನಿಂದಲೂ ಠೀವಿಯಿಂದಲೂ ಮಾತನಾಡುತ್ತಿದ್ದ. ಪಾನಗೃಹದಲ್ಲಿ ಗಂಟೆಗಟ್ಟಲೆ ಕೂತು ಟೀ ಸೇವಿಸುತ್ತ ಈತ ಮಾಡುತ್ತಿದ್ದ ಸಂಭಾಷಣೆಗಳಿಂದ ಮೋಹಗೊಂಡ ಸ್ನೇಹಿತರು ಈತನ ತೀಕ್ಷ್ಣ ಬುದ್ಧಗೂ ಅಪಾರ ಲೋಕಾನುಭವಕ್ಕೂ ವಾಗ್ವೈಖರಿಗೂ ತಲೆದೂಗುತ್ತಿದ್ದರು. ಯಾವ ವಿಷಯದ ಪ್ರಸ್ತಾಪವೇ ಆದರೂ ಜಾನ್ಸನ್ ಗೆಲ್ಲಬೇಕೆಂದೇ ವಾದಮಾಡುತ್ತಿದ್ದ. ಜಯಗಳಿಸಬೇಕೆಂದೇ ಪಟ್ಟು ಹಿಡಿದು ವಾದ ಮಾಡುತ್ತಿದ್ದ. ಈತನ ಈ ಪ್ರವೃತ್ತಿಯನ್ನು ಕುರಿತು ಗೋಲ್ಡ್‍ಸ್ಮಿತ್ ಒಮ್ಮೆ ಹೀಗೆ ಹೇಳಿದ : ಅವನು ಗುರಿಯಿಟ್ಟು ಪಿಸ್ತೂಲನ್ನು ಹಾರಿಸಿ ತನ್ನ ವಿರೋಧಿಯನ್ನು ಕೆಡಹುವುದಕ್ಕೆ ಸಾಧ್ಯವಾಗದಿದ್ದರೆ, ಅದೇ ಪಿಸ್ತೂಲನ್ನು ಹಿಂದಿರುಗಿಸಿಕೊಂಡು ಗದಾಪ್ರಹಾರ ಮಾಡಿ ಶತ್ರುವನ್ನು ಸೋಲಿಸುತ್ತಾನೆ. ಈ ಮಹಾ ಮಾತುಗಾರನ ಮೋಡಿಗೆ ಸಿಗದವರೇ ಅಪರೂಪ. ಬಾಸ್‍ವೆಲ್ ಬರೆದ ಜಾನ್ಸನ್ನನ ಜೀವನ ಚರಿತ್ರೆ ಆ ದಿನಗಳನ್ನು ವಿವರವಾಗಿ ಬಣ್ಣಿಸಿ ಈತನ ವ್ಯಕ್ತಿತ್ವವನ್ನು ಶಾಶ್ವತವಾಗಿ ಮೆರೆಸಿದೆ.												(ಎಸ್.ಆರ್.ಎಸ್.)

ಬಾಸ್ವೆಲ್‍ನ ಪ್ರೀತಿಯ ಒತ್ತಾಯಕ್ಕೆ ಮಣಿದು ಜಾನ್ಸನ್ ತನ್ನ ಅರವತ್ತ ನಾಲ್ಕನೆಯ ವಯಸ್ಸಿನಲ್ಲಿ ಅವನೊಂದಿಗೆ ಸ್ಕಾಟ್ಲೆಂಡ್ ಪ್ರವಾಸಕ್ಕೆ ತೆರಳಿದ. ಆ ಪ್ರವಾಸದ ಅನುಭವಗಳನ್ನು ಕುರಿತು ಬಾಸ್ವೆಲ್ ಬರೆದ ಜರ್ನಿ ಟು ದಿ ಹೈಬ್ರೈಡಿಸ್ ಎಂಬ ಸ್ವಾರಸ್ಯವಾದ ಪ್ರವಾಸದ ಕಥೆಯಲ್ಲಿ ಜಾನ್‍ಸನ್ನನ ಅಪೂರ್ವ ವ್ಯಕ್ತಿತ್ವದ ಪರಿಚಯವಿದೆ.

1763 ರಿಂದ 1783ರವರೆಗೆ ಜಾನ್ಸನ್ನನನ್ನು ತಮ್ಮ ಮನೆಯಲ್ಲಿ ಆದರದಿಂದ ಸತ್ಕರಿಸಿ ಅಭಿಮಾನದಿಂದ ನೋಡಿಕೊಂಡವರು ಶ್ರೀಮಂತ ತ್ರೇಲ್ ದಂಪತಿಗಳು, ಮಾದಕ ದ್ರವ್ಯ ತಯಾರಿಸುವ ಕಾರ್ಖಾನೆಯ ಮಾಲೀಕನಾಗಿದ್ದ ಹೆನ್ರಿ ತ್ರೇಲ್ ಲಂಡನ್ ನಗರದಲ್ಲಿ ಕಟ್ಟಿಸಿದ ಬಂಗಲೆಯಲ್ಲಿ ಜಾನ್ಸನ್ ಉಪಯೋಗಿಸಲೆಂದು ಒಂದು ಕೊಠಡಿಯನ್ನು ಮೀಸಲಾಗಿಟ್ಟಿದ್ದ. ಅಲ್ಲಿ ಈತನಿಗೆ ರಾಜೋಪಚಾರ ದೊರೆಯುತ್ತಿತ್ತು. ಜಾನ್ಸನ್ ಕೂಡ ಒಬ್ಬ ಕುರುಡಿ, ಒಬ್ಬ ನೀಗ್ರೋ ಸೇವಕ, ಒಬ್ಬ ವೈದ್ಯ, ಅಂಗವಿಕಲರು, ನಿಶ್ಯಕ್ತರು, ಬಡವರು ಮುಂತಾದ ವಿಚಿತ್ರ ಜನಗಳಿಂದ ಕೂಡಿದ ತನ್ನದೇ ಬಳಗವೊಂದಕ್ಕೆ ಆಶ್ರಯ ಕೊಟ್ಟಿದ್ದ.
ಜಾನ್ಸನ್ನನ ಹೃದಯ ಯಾವಾಗಲೂ ದಯೆ ಮತ್ತು ಅನುಕಂಪದಿಂದ ಕೂಡಿತ್ತು. ದೈವದಲ್ಲಿ ಅಪಾರ ಭಕ್ತಿ ಮತ್ತು ಶ್ರದ್ಧೆಯಿತ್ತು. ತಾನು ಕ್ರೈಸ್ತ ತತ್ತ್ವಗಳನ್ನು ಪೂರ್ಣವಾಗಿ ಪರಿಪಾಲಿಸಿ ಸನಾರ್ಗದಲ್ಲಿರಬೇಕೆಂಬುದೇ ಈತನ ಹಂಬಲವಾಗಿತ್ತು. ಸ್ನೇಹಿತರ ಸಹವಾಸದಲ್ಲಿ ಸುಖಿಯಾಗಿರುತ್ತಿದ್ದ ಈತ ಒಬ್ಬನೇ ಇದ್ದಾಗ ದುಮ್ಮಾನಕ್ಕೊಳಗಾಗುತ್ತಿದ್ದ. ಸತ್ಯನಿಷ್ಠೆಗಾಗಿ ಎಂಥ ತ್ಯಾಗಕ್ಕೂ ಈತ ಯಾವಾಗಲೂ ಸಿದ್ಧನಾಗಿದ್ದ. ಯಾವ ವ್ಯಕ್ತಿಗೂ ಹೆದರದ ಈತ ಮರಣದ ಬಗ್ಗೆ ಬಹಳ ಭೀತಿಪಡುತ್ತಿದ್ದ. ಬಾಸ್ವೆಲ್ ಬರೆದ ಈತನ ಜೀವನಚರಿತ್ರೆ ಜಾನ್ಸನ್ನನ ಈ ವಿಶೇಷ ಗುಣಗಳನ್ನು ಹೃದಯಂಗಮವಾಗಿ ಚಿತ್ರಿಸಿದೆ.

ಜಾನ್ಸನ್ನನ ಕೊನೆಯ ದಿವಸಗಳಲ್ಲಿ ಲಿಚ್‍ಫೀಲ್ಡ್, ಆಕ್ಸ್‍ಫರ್ಡ್, ಬರ್ಮಿಂಗ್‍ಹ್ಯಾಮ್, ಆಷ್‍ಬರ್ನ್ ಮುಂತಾದ ಸ್ಥಳಗಳಿಗೆ ಭೇಟಿಕೊಟ್ಟು ಹಳೆಯ ಗೆಳೆಯರನ್ನು ನೋಡಿಕೊಂಡು ಲಂಡನ್ನಿಗೆ ಹಿಂದಿರುಗಿದ. ಕೊನೆಯಗಳಿಗೆಯವರೆಗೂ ಈತನ ಬುದ್ಧಿಶಕ್ತಿ ಚುರುಕಾಗಿತ್ತು; ವಾಕ್ ಚತುರತೆ ಪ್ರಗಲ್ಭವಾಗಿತ್ತು. ಹಾಸಿಗೆ ಹಿಡಿದು ಮಲಗಿದಾಗ ಸಹ ವೈದ್ಯನೊಡನೆ ಮಾತನಾಡುವಾಗ ಷೇಕ್ಸ್‍ಪಿಯರನ ಸಾಲುಗಳನ್ನು ಈತ ಉದ್ಧರಿಸಿದನಂತೆ. ತನ್ನ ಸಾವು ಸಮೀಪಿಸುತ್ತಿದೆಯೆಂದು ತಿಳಿದ ಜಾನ್ಸನ್ ಔಷಧಿಯ ಸೇವೆಯನ್ನು ತೊರೆದು, ಆಹಾರವನ್ನು ಮಿತಗೊಳಿಸಿದ. ಕಡೆಯ ಗಳಿಗೆಯಲ್ಲಿ ಈತ ರಚಿಸಿದ ದೇವತಾ ಪ್ರಾರ್ಥನೆ ಹೃದಯಸ್ಪರ್ಶಿಯಾಗಿದೆ : ತಂದೆಯೇ, ನನ್ನ ತಪ್ಪುಗಳನ್ನು ಮನ್ನಿಸು; ನನಗೆ ಶಾಶ್ವತವಾದ ಸುಖವನ್ನು ಕರುಣಿಸಿ. ಏಸುಕ್ರಿಸ್ತನ ಅನುಗ್ರಹ ನನಗೆ ದೊರಕಲಿ-ಎಂಬುದೇ ಅದರ ಸಾರಾಂಶ. 1784ರಲ್ಲಿ ತೀರಿಕೊಂಡ ಜಾನ್ಸನ್ನನ ಅಂತ್ಯಸಂಸ್ಕಾರ ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿ ನಡೆದು ಇಡೀ ರಾಷ್ಟ್ರವೇ ಈ ಅಮರ ವ್ಯಕ್ತಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿತು.

ಬಾಸ್ವೆಲ್ಲನ ಜೀವನ ಚರಿತ್ರೆಯಲ್ಲದೆ ಜಾನ್ಸನ್ನನನ್ನು ಕುರಿತಂತೆ ಜಾನ್ ಹಾಪ್‍ಕಿನ್ಸ್ 1787ರಲ್ಲಿ ಬರೆದ ಒಂದು ಜೀವನ ಚರಿತ್ರೆಯೂ ಶ್ರೀಮತಿ ಪಿಯೊಜಿóಯ ಅನೆಕ್‍ಡೋಟ್ಸ್ ಆಫ್ ದಿ ಲೇಟ್ ಸ್ಯಾಮ್ಯುಯಲ್ ಜಾನ್ಸನ್ (1786) ಎಂಬ ಕೃತಿಯೂ ಆರ್.ಡಬ್ಲ್ಯು.ಚಾಪ್‍ಮನ್ 1953ರಲ್ಲಿ ಮೂರು ಸಂಪುಟಗಳಲ್ಲಿ ಪ್ರಕಟಿಸಿದ ಜಾನ್ಸನ್ನನ ಪತ್ರಗಳು ಎಂಬುದೂ ಜಾನ್ಸನ್ನನ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತದೆ.									(ಎಚ್.ಜಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ